ವಾಯುಗತಿವಿಜ್ಞಾನ
	ಅನಿಲಗಳ ಗತಿವೃತ್ತಾಂತವನ್ನು, ಮುಖ್ಯವಾಗಿ ವಾಯುವಿನಲ್ಲಿ ಚಲಿಸುತ್ತಿರುವ ವಸ್ತುಗಳಮೇಲೆ ವರ್ತಿಸುವ ವಿವಿಧ ಬಲಗಳನ್ನು, ಅಭ್ಯಸಿಸುವ ಭೌತವಿಜ್ಞಾನವಿಭಾಗ (ಏರೊಡೈನಮಿಕ್ಸ್). ಪ್ರಾಚೀನ ಕಾಲದಲ್ಲಿ ಪಕ್ಷಿಗಳ ಹಾರಾಟ ಹಾಗೂ ಪ್ರಕ್ಷೇಪ್ಯ ವಸ್ತುಗಳು ಕ್ರಮಿಸುವ ಪಥಗಳನ್ನು ಗಮನಿಸುತ್ತಿದ್ದ ಮಾನವನಲ್ಲಿ ಇವುಗಳ ಚಲನೆಗೆ ಕಾರಣವಾದ ಶಕ್ತಿಗಳ ಹಾಗೂ ಅಲ್ಲಿಯ ಅಂತರಕ್ರಿಯೆಗಳನ್ನು ಅರಿಯುವ ಕುತೂಹಲ ಮೂಡಿತು. ಆದರೆ ಅವನಿಗೆ ಆ ಕಾಲದಲ್ಲಿ ವಾಯುವಿನ ಭೌತಿಕ ಗುಣಲಕ್ಷಣಗಳ ಅರಿವಿರಲಿಲ್ಲ. ಅಲ್ಲದೆ ಇಂಥ ಗುಣಲಕ್ಷಣಗಳನ್ನು ಕ್ರಮಬದ್ಧವಾಗಿ ಅಭ್ಯಸಿಸಲು ಪ್ರಯತ್ನವನ್ನೂ ಮಾಡಲಿಲ್ಲ. ವಸ್ತುಗಳನ್ನು ಆಧರಿಸುವ ಅಥವಾ ತಳ್ಳುವ ಶಕ್ತಿಯನ್ನು ವಾಯು ನೀಡುವುದೆಂಬ ಪ್ರಬಲ ನಂಬಿಕೆಯನ್ನು ಅಂದಿನವರ ಕಲ್ಪನೆಗಳು ಬಿಂಬಿಸುತ್ತಿದ್ದುವು. ವಾಸ್ತವವಾಗಿ ವಾಯುವು ಹಾರಾಟಕ್ಕೆ ಸಹಕರಿಸುವ ಶಕ್ತಿ, ತಡೆಯೊಡ್ಡುವ ಶಕ್ತಿ ಅಲ್ಲವೆಂಬ ಪರಿಕಲ್ಪನೆ ಶತಮಾನಪರ್ಯಂತ ಮುಂದುವರಿಯಿತು. ಪ್ರಕ್ಷೇಪ್ಯವಸ್ತುವಿನ ಚಲನಶಕ್ತಿ ವಾಯುವಿನಿಂದ ಬರುವುದಿಲ್ಲವೆಂದೂ ಅದು ಪ್ರಕ್ಷೇಪನ ಸಾಧನದಿಂದ ಲಭಿಸುವುದೆಂದೂ 16ನೆಯ ಶತಮಾನದಲ್ಲಿ ತಿಳಿದುಬಂದರೂ ಹಳೆಯ ನಂಬಿಕೆ ಬದಲಾಗಲಿಲ್ಲ. 

	ಸುಮಾರು 15ನೆಯ ಶತಮಾನದ ಕೊನೆಯಲ್ಲಿ ಲಿಯೊನಾರ್ಡೋ ಡವಿಂಚಿ (1452-1519) ವಾಯು ಯಾವುದೇ ಘನವಸ್ತುವಿನ ಚಲನೆಗೆ ತಡೆಯೊಡ್ಡುವುದೆಂದೂ ಆ ವಸ್ತು ವಾಯುವಿನ ಮೇಲೆ ಬೀರುವ ಒತ್ತಡವೇ ಇದರ ಕಾರಣವೆಂದೂ ಅಭಿಪ್ರಾಯಪಟ್ಟ. ಮುಂದೆ ಗೆಲಿಲಿಯೊ (1564-1642) ಹಲವಾರು ಪ್ರಯೋಗಗಳ ಮೂಲಕ ವಾಯುವು ಘನವಸ್ತುವಿನ ಚಲನೆಗೆ ತಡೆಯೊಡ್ಡುತ್ತದೆಂಬ ಸಿದ್ಧಾಂತವನ್ನು ಸ್ಥಿರಗೊಳಿಸಿದನಲ್ಲದೆ ಈ ಪ್ರತಿರೋಧ ವಾಯುವಿನ ಮೂಲಕ ಚಲಿಸುವ ಘನವಸ್ತುವಿನ ವೇಗದ ಅನುಪಾತದಲ್ಲಿರುವುದೆಂದೂ ತೀರ್ಮಾನಿಸಿದ. 

	17ನೆಯ ಶತಮಾನದ ಕೊನೆಯಲ್ಲಿ ಕ್ರಿಶ್ಚಿಯನ್ ಹೈಗೆನ್ಸ್ (1629-93) ಮತ್ತು ಐಸಾಕ್ ನ್ಯೂಟನ್ (1642-1727) ಎಂಬ ವಿಜ್ಞಾನಿಗಳು ಯಾವುದೇ ಘನವಸ್ತು ಚಲಿಸುವಾಗ ವಾಯು ಒಡ್ಡುವ ಪ್ರತಿರೋಧ ಆ ವಸ್ತುವಿನ ವೇಗದ ವರ್ಗಾನುಪಾತದಲ್ಲಿದೆಯೆಂದು ತೋರಿಸಿಕೊಟ್ಟರು. ನ್ಯೂಟನ್ ತನ್ನ ಸಂಶೋಧನೆಗಳಿಂದ ಬಲವಿಜ್ಞಾನದ ನಿಯಮಗಳನ್ನು ಮಂಡಿಸಿದಾಗ ವಾಯುಗತಿವಿಜ್ಞಾನದ ಶಾಸ್ತ್ರೀಯ ಅಧ್ಯಯನ ಪ್ರಾರಂಭ ವಾಯಿತು. ಮುಂದೆ ನಡೆದ ಸಂಶೋಧನೆಗಳ ಫಲವಾಗಿ ವಾಯುವಿನ ಸಂವಹನ ಗುಣ ಹಾಗೂ ತಾಪಮಾನದ ಬದಲಾವಣೆಯಿಂದ ವಿವಿಧ ವಾಯುಸ್ತರಗಳಲ್ಲಿ ಉಂಟಾಗುವ ಅಸಮತೋಲನ, ವಾಯುಕ್ಷೋಭೆ, ಉತ್ಥಾಪಕಬಲ ಹಾಗೂ ಜಗ್ಗುಬಲ ಇವುಗಳ ಬಗ್ಗೆ ಅಪಾರ ತಿಳಿವು ಉಂಟಾಗಿ ವಾಯುಮಂಡಲ ಹಾಗೂ ಅಂತರಿಕ್ಷದೆಡೆಗೆ ಮಾನವ ಲಗ್ಗೆಯಿಡಲು ಅನುಕೂಲವಾಯಿತು. 

	ವಾಯುಗತಿವಿಜ್ಞಾನ ವಾಸ್ತವವಾಗಿ ತರಲಬಲವಿಜ್ಞಾನದ (ಫ್ಲೂಯ್ಡ್ ಮೆಕಾನಿಕ್ಸ್) ಒಂದು ಭಾಗ. ತರಲಗಳು ಸ್ನಿಗ್ಧ (ವಿಸ್ಕಸ್), ವಿರಳ (ರೇರ್) ಅಥವಾ ಬರೇ ಅನಿಲ ಆಗಿರಬಹುದು. ಆದ್ದರಿಂದ ಅಧ್ಯಯನದ ವ್ಯಾಪ್ತಿ ಐದು ವಿಭಿನ್ನ ಕ್ಷೇತ್ರಗಳಲ್ಲಿವೆ: ಅಸಂಪೀಡನಶೀಲ (ಇನ್‍ಕಂಪ್ರೆಸಿ ಬಲ್), ಸಂಪೀಡನಶೀಲ ಅವಧ್ವನಿಕ (ಕಂಪ್ರೆಸಿಬಲ್ ಸಬ್‍ಸಾನಿಕ್), ಅಂತರಧ್ವನಿಕ (ಟ್ರೇನ್ಸಾನಿಕ್), ಅಧಿಧ್ವನಿಕ (ಸೂಪರ್‍ಸಾನಿಕ್) ಮತ್ತು ಅತೀತಾಧಿಧ್ವನಿಕ (ಹೈಪರ್‍ಸಾನಿಕ್). 

	ವಾಯುಗತಿವಿಜ್ಞಾನದ ಅತಿಮುಖ್ಯ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅನ್ವಯ ವಿಮಾನನಿರ್ಮಾಣದಲ್ಲಿದೆ. ತದನುಸಾರ ಅಧ್ಯಯನವನ್ನು ರೆಕ್ಕೆ ಸಿದ್ಧಾಂತ (ವಿಂಗ್ ತಿಯರಿ), ವಿಮಾನದ ಕಾರ್ಯನಿರ್ವಹಣೆ ಮತ್ತು ಸ್ಥಾಯಿತ್ವಗಳ ಅಂದಾಜು, ಹಾಗೂ ನಿಯಂತ್ರಣ ಸಮಸ್ಯೆ ಎಂಬ ಮೂರು ಪರಸ್ಪರ ಪೂರಕ ವಿಭಾಗಗಳಲ್ಲಿ ಮಾಡಲಾಗುವುದು. 

	ವಾಯುಗತಿವಿಜ್ಞಾನದ ನಿಯಮಗಳು: ಉತ್ಥಾಪನೆ (ಲಿಫ್ಟ್-ಸಂಪೀಡ ನಶೀಲ) ಮತ್ತು ಜಗ್ಗು (ಡ್ರ್ಯಾಗ್-ಅಸಂಪೀಡನಶೀಲ). ಇವು ತರಲದಿಂದ ಘನವಸ್ತುವಿನ ಮೇಲ್ಮೈಗೆ ಬಲ ವರ್ಗಾಯಿಸಲ್ಪಡುವುದರಿಂದ ಉದ್ಭವಿಸುತ್ತವೆ. ಈ ಬಲ, ವಸ್ತುವಿನ ಮೇಲ್ಮೈಮೇಲೆ ಒತ್ತಡ ಹಾಗೂ ಅಪರೂಪಣ ಶ್ರಮಗಳನ್ನು (ಶಿಯರಿಂಗ್ ಸ್ಟ್ರೆಸ್) ಉಂಟುಮಾಡುವುದು. ಉತ್ಥಾಪನೆ ವಸ್ತುಗತಿಗೆ ಲಂಬವಾಗಿಯೂ ಜಗ್ಗು ವಿರುದ್ಧವಾಗಿಯೂ ಇರುವುವು. ಡೇನಿಯಲ್ ಬರ್ನೂಲಿಯ (1667-1748, ಸ್ವಿಸ್ ಗಣಿತಜ್ಞ) ನಿಯಮದ ಪ್ರಕಾರ ತರಲದ ಜವ ಕಡಿಮೆಯಾದಂತೆ ಅದರ ಒತ್ತಡ ಏರುವುದು. ಒತ್ತಡದಲ್ಲಿಯ ಈ ವ್ಯತ್ಯಾಸ ವಾಯುವಾಹಿ (ಏರ್ ಫ್ಲೋ) ಅಸಮ್ಮಿತಿಯಲ್ಲಿದ್ದಾಗ ಸಂಭವಿಸುವುದು. ವಾಯುವಿನಲ್ಲಿಯ ಇದರ ಗತಿಯ ಮೂಲಕ ಉತ್ಥಾಪನೆಯನ್ನು ವಿಶ್ಲೇಷಿಸಬಹುದು. ರೆಕ್ಕೆಯನ್ನು ವಿಮಾನದ ಅಕ್ಷಕ್ಕೆ ಸಮವಾಗಿ ಕತ್ತರಿಸಿದರೆ ದೊರೆಯುವ ಸಮತಲ ವಕ್ರರೇಖೆಗೆ ರೆಕ್ಕೆಯ ರೇಕು (ಏರ್ ಫಾಯ್ಲ್) ಎಂದು ಹೆಸರು. ಅಸಮ್ಮಿತಿವಾಹಿಗೆ ಕಾರಣಗಳು ಎರಡು: 1. ರೆಕ್ಕೆಯ ರೇಕುವಿನ ವಕ್ರತೊಲೆ (ಕ್ಯಾಂಬರ್), 2. ಆಕ್ರಮಣ ಕೋನ (ಆ್ಯಂಗಲ್ ಆಫ್ ಅಟ್ಯಾಕ್). ರೆಕ್ಕೆಯ ರೇಕುವಿನ ಮುಂದಿನ ಅಂಚನ್ನು (ಲೀಡಿಂಗ್ ಎಡ್ಜ್) ವಾಯು ಸಮೀಪಿಸಿದಂತೆ ವಿಭಜಿಸಲ್ಪಟ್ಟು ಅದರ ಸುತ್ತಲೂ ಹರಿಯತೊಡಗುವುದು ಮತ್ತು ಹಿಂದಿನ ಅಂಚಿನ ಅನಂತರ ಏಕೀಭವಿಸುವುದು. ಇದನ್ನು ಕುಟ್ಟಸ್ಥಿತಿ (ಎಂ. ವಿಲ್ಹೆಲ್ಮ್ ಕುಟ್ಟ, 1867-1944) ಎನ್ನುವರು. ರೆಕ್ಕೆಯ ರೇಕು ವಾಯುವನ್ನು ವಕ್ರತೊಲೆಯ ಉದ್ದಕ್ಕೆ ದರ್ಶಿಸುವ ಮತ್ತು ಒಂದು ಕೋನದಲ್ಲಿ ಏಕೀಭವಿಸುವ ಮೂಲಕ ವಾಲಿಸುತ್ತದೆ. ಇದು ನ್ಯೂಟನ್ನನ ಮೂರನೆಯ ನಿಯಮದ ಪ್ರಕಾರ ನಡೆಯುವುದು. ಉತ್ಥಾಪನೆಯ ಮೌಲ್ಯವು ಆಕ್ರಮಣಕೋನ, ಜವ, ವಕ್ರತೊಲೆ, ರೆಕ್ಕೆಯ ಸಲೆ, ವಾಯುಸಾಂದ್ರತೆ-ಇವನ್ನು ಅವಲಂಬಿಸಿದೆ. 

ಚಿತ್ರ-1

	ಆಕ್ರಮಣಕೋನ: ರೆಕ್ಕೆ ಮತ್ತು ವಾಯುಪ್ರವಾಹಗಳ ನಡುವಿನ ಕೋನ. ಆಕ್ರಮಣ ಕೋನ ಹೆಚ್ಚಿದಂತೆ ವಾಯುವಿಗೆ ಮೇಲಿನ ಪಾತಳಿಯನ್ನು ಸ್ಪರ್ಶಿಸುವುದು ಕಷ್ಟವೆನಿಸುವುದು. ಇಲ್ಲಿ ವಾಯು ಏರುತ್ತಿರುವ ಒತ್ತಡದ ವಿರುದ್ಧ ದಾರಿ ಮಾಡಿಕೊಂಡು ಸಾಗಬೇಕು. ಹೀಗೆ ರೆಕ್ಕೆಯ ಪ್ರತಿ ವಿಭಾಗಕ್ಕೂ ಆಕ್ರಮಣ ಕೋನದ ಒಂದು ಅವಧಿಕ (ಕ್ರಿಟಿಕಲ್) ಬೆಲೆಯಿದೆ. ಈ ಪರಿಸ್ಥಿತಿಯಲ್ಲಿಯ ರೆಕ್ಕೆಗಳನ್ನು ಅಸ್ಥಿರ (ಸ್ಟಾಲ್ಡ್) ಎನ್ನುತ್ತೇವೆ.

	ತರಲದಲ್ಲಿಯ ವಸ್ತುವಿನ ಮುಂದುವರಿದ ಗತಿಯನ್ನು ನಿರೋಧಿಸುವ ಬಲವೇ ಜಗ್ಗು (ಡ್ರ್ಯಾಗ್). ಇದರಲ್ಲಿ ಎರಡು ಪ್ರಕಾರಗಳು: 1. ಒತ್ತಡ (ಸಂಮರ್ದ) ಜಗ್ಗು-ಇದು ವಸ್ತುವಿನ ಚಲನದಿಶೆಯ ಎಲ್ಲ ಸಂಮರ್ದ ಘಟಕಗಳ ಫಲಿತ (ರಿಸಲ್ಟಂಟ್) ಮತ್ತು 2. ಘರ್ಷಣ ಜಗ್ಗು-ಇದು ಎಲ್ಲ ಸ್ಪರ್ಶಕ ಬಲಗಳ (ಟ್ಯಾಂಜೆನ್ಶಿಯಲ್ ಫೋರ್ಸ್) ಅದೇ ದಿಶೆಯ ಘಟಕಗಳ ಫಲಿತ. ಉತ್ಥಾಪನೆಯನ್ನು ಅವಲಂಬಿಸಿದ ಒತ್ತಡಜಗ್ಗುವನ್ನು ಪ್ರೇರಿತಜಗ್ಗು (ಇಂಡ್ಯುಸ್ಡ್ ಡ್ರ್ಯಾಗ್) ಎಂದೂ ಇದನ್ನು ಅವಲಂಬಿಸದ ಒತ್ತಡಜಗ್ಗುವನ್ನು ಆಕೃತಿಜಗ್ಗುವೆಂದೂ (ಫಾರ್ಮ್ ಡ್ರ್ಯಾಗ್ ಅಥವಾ ವೇಕ್ ಡ್ರ್ಯಾಗ್-ಇದು ರೆಕ್ಕೆಯ ಅಂಚಿನ ಆಕೃತಿಯನ್ನು ಅವಲಂಬಿಸಿದೆ) ಕರೆಯುತ್ತೇವೆ. ಆಕೃತಿಜಗ್ಗು ಮತ್ತು ಘರ್ಷಣಜಗ್ಗು-ಇವನ್ನು ರೆಕ್ಕೆಯ ಆಯಾ ಪ್ರದೇಶದ ಅಡ್ಡಛೇದನದಿಂದ ನಿರ್ಧರಿಸುವುದರಿಂದ ಇವೆರಡನ್ನೂ ಸೇರಿಸಿ ಪಾಶ್ರ್ವರೇಖಾ ಜಗ್ಗು (ಪ್ರೊಫೈಲ್ ಡ್ರ್ಯಾಗ್) ಎಂದು ಕರೆಯುತ್ತೇವೆ. ತರಲಪ್ರವಾಹ ಫಲಕೀಯವೋ (ಲ್ಯಾಮಿನಾರ್) ಪ್ರಕ್ಷುಬ್ಧವೋ (ಟಬ್ರ್ಯೂಲಂಟ್) ಈ ಘರ್ಷಣ ಜಗ್ಗುವಿನ ಬೆಲೆ ಎಂಬುದನ್ನು ಅವಲಂಬಿಸಿದೆ. ಫಲಕೀಯ ಪ್ರವಾಹದಲ್ಲಿ ತರಲಾಣುಗಳು ಪ್ರಸಾಮಾನ್ಯ ಮಾರ್ಗದಲ್ಲಿ ಅದರಲ್ಲಿಯೂ ಮೇಲ್ಮೈಯ್ಯ ದಿಶೆಯಲ್ಲಿ ಚಲಿಸುವುವು. ಪ್ರಕ್ಷುಬ್ಧಪ್ರವಾಹ ಉಚ್ಚಜವದೊಂದಿಗೆ ತಲೆದೋರುವುದು. ಇದರ ಪರಿಣಾಮ ಪ್ರವಾಹ ಫಲಕೀಯ ಮಾತ್ರ ಆಗಿದ್ದರೆ ಉಂಟಾಗಬಹುದಾಗಿದ್ದ ಘರ್ಷಣೆಗಿಂತಲೂ ಹೆಚ್ಚು ಹೊರಮೈಘರ್ಷಣೆ (ಸ್ಕಿನ್ ಫ್ರಿಕ್ಶನ್) ತಲೆದೋರುವುದು. ಈ ನಿಯಮಗಳ ಅನುಸಾರ ಫಲಕೀಯಪ್ರವಾಹ ರೆಕ್ಕೆಯ ರೇಕುಗಳನ್ನು (ಲ್ಯಾಮಿನಾರ್ ಫ್ಲೋ ಏರೊಫಾಯಿಲ್) ನಿರ್ಮಿಸಲಾಗುತ್ತದೆ. ಇದರಿಂದ, ರೆಕ್ಕೆಯ ರೇಕುಗಳ ಮೇಲಿನ ಒತ್ತಡ ಕ್ಷೇತ್ರಗಳನ್ನು, ಬಲು ಮಟ್ಟಿಗೆ ಫಲಕೀಯಪ್ರವಾಹವೇ ಇರುವಂತೆ ಏರ್ಪಡಿಸಲಾಗಿದೆ.

	ಆಕೃತಿಜಗ್ಗುವಿನ ಬೆಲೆ ವಸ್ತುವಿನ ಆಕೃತಿ ಅಥವಾ ಆಕಾರವನ್ನು ಅವಲಂಬಿಸಿದೆ. ವಸ್ತು ಪ್ರವಾಹಮಾರ್ಗದಲ್ಲಿಲ್ಲದಿದ್ದರೆ ಜಗ್ಗುಬಲ ಆಕೃತಿ ಜಗ್ಗುವೂ ಪ್ರವಾಹಮಾರ್ಗದಲ್ಲಿದ್ದರೆ ಘರ್ಷಣಜಗ್ಗುವೂ ಆಗಿರುವುದು. 

	ಸಂಪೀಡನಶೀಲ ವಾಯುಗತಿವಿಜ್ಞಾನ (ಕಂಪ್ರೆಸಿಬಲ್ ಏರೊಡೈನಮಿಕ್ಸ್): ತತ್‍ಕ್ಷಣ ಒತ್ತಡ ಪ್ರಸಾರವಾಗುವುದನ್ನು ಅಸಂಪೀಡನ ಶೀಲವೆಂದೂ ಪರಿಮಿತವೇಗದಿಂದ ಆಗುವುದನ್ನು  ಸಂಪೀಡನಶೀಲ ವೆಂದೂ ಕರೆಯುತ್ತೇವೆ. ಅತ್ಯಲ್ಪ ಒತ್ತಡ ವ್ಯತ್ಯಾಸವುಳ್ಳ ಪ್ರಸಾರವೇಗವೇ ಧ್ವನಿವೇಗ (ಸಾನಿಕ್ ವೆಲಾಸಿಟಿ). ಸಂಪೀಡನಶೀಲ ಪ್ರವಾಹದ ಒಂದು ಮುಖ್ಯ ಲಕ್ಷಣಸೂಚಕಪ್ರಾಚಲ-ಪ್ರವಾಹವೇಗ ಮತ್ತು ಧ್ವನಿವೇಗಗಳ ನಡುವಿನ ನಿಷ್ಪತ್ತಿ (ಮ್ಯಾಕ್ ಸಂಖ್ಯೆ). ಇದನ್ನು ಉನ್ನತಿಯಲ್ಲಿಯ ವಿಮಾನದ ಜವವನ್ನು ಧ್ವನಿಜವದಿಂದ ಭಾಗಿಸುವುದರ ಮೂಲಕ ಪಡೆಯ ಬಹುದು. ಇದು ಅಧಿಧ್ವನಿಕ (ಸೂಪರ್‍ಸಾನಿಕ್) ಚಲನೆಯ ಅನ್ವೇಷಣೆಯಲ್ಲಿ ಮೊದಲ ಹೆಜ್ಜೆ ಇಟ್ಟ ಅನ್ಸ್ರ್ವ್ ಮ್ಯಾಕ್ (1838-1916, ನೋಡಿ) ಎಂಬವನ ಹೆಸರಿನಲ್ಲಿದೆ. ಮ್ಯಾಕ್ ಸಂಖ್ಯೆ ಅನಿಲದ ಸ್ಥಳೀಯ ಚಲನ ಮತ್ತು ಉಷ್ಣ ಶಕ್ತಿಗಳ ನಿಷ್ಪತ್ತಿಯಲ್ಲಿದೆ. ಈ ಮಾನಕದ ಪ್ರಕಾರ ಧ್ವನಿವೇಗದ ಮ್ಯಾಕ್ ಸಂಖ್ಯೆ 1; ಮ್ಯಾಕ್ ಸಂಖ್ಯೆ 0.8ರ ವರೆಗಿನವನ್ನು ಅವಧ್ವನಿಕ; 0.8-1.2ರ ವರೆಗಿನವನ್ನು ಅಂತರಧ್ವನಿಕ; 1.2 - 5ರ ವರೆಗಿನವನ್ನು ಅಧಿಧ್ವನಿಕ; ಮತ್ತು 5ರ ಮೇಲಿನವನ್ನು ಅತೀತಾಧಿಧ್ವನಿಕ ವೇಗಗಳೆಂದು ಉಲ್ಲೇಖಿಸುತ್ತೇವೆ. ಮ್ಯಾಕ್‍ಸಂಖ್ಯೆ 1ಕ್ಕಿಂತ ಸ್ವಲ್ಪ ಕಡಿಮೆ ಅಥವಾ ಸ್ಷಲ್ಪ ಹೆಚ್ಚಾಗಿರುವುದನ್ನು ಅಂತರಧ್ವನಿಕ ಎನ್ನುವರು. 

	ಅಧಿಧ್ವನಿಕವೇಗದಲ್ಲಿ ಹಾರಾಟ ನಡೆಸುವ ವಿಮಾನದಿಂದ ಉತ್ಪತ್ತಿಯಾಗುವ ಸಂಮರ್ದಕ್ಷೋಭೆಯೇ (ಪ್ರೆಷರ್ ಡಿಸ್ಟರ್ಬನ್ಸ್) ಆಘಾತತರಂಗ (ಶಾಕ್ ವೇವ್). ಧ್ವನಿವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುವ ವಿಮಾನ ಕೂಡ ಆಘಾತತರಂಗಗಳನ್ನು ಉಂಟುಮಾಡುವುದು. ವಾಸ್ತವಿಕವಾಗಿ ಕೆಲವು ವಿಮಾನಗಳ ಮೇಲ್ಮೈ ಅನಂತರದ ವಾಯುಪ್ರವಾಹ ಅಧಿಧ್ವನಿಕವಾಗಿರುವುದರಿಂದ ಈ ತರಂಗಗಳು ಸಂಭವಿಸುವುವು. ಇವು ವಿಮಾನದ ಮೇಲೆ ತರಂಗಜಗ್ಗುವನ್ನು ಉಂಟುಮಾಡುವುದರ ಮೂಲಕ ಜಗ್ಗುವನ್ನು ವರ್ಧಿಸುತ್ತವೆ.

	ಅಧಿಧ್ವನಿಕ ವಿಮಾನ ಮೇಲೆ ಹಾರಿದ ಅನಂತರ ಕೇಳುವ ತೀಕ್ಷ್ಣಬಾಜಣೆಗೆ ಧ್ವನಿಮೊಳಗು (ಸಾನಿಕ್ ಬೂಮ್) ಎಂದು ಹೆಸರು. ಇದು ಆಘಾತತರಂಗಗಳಿಂದ ಉಂಟಾಗುವುದು. 
 
	ಅತಿವಾಯುಗತಿವಿಜ್ಞಾನ: ಅತ್ಯಂತ ವಿರಳೀಕೃತ ಅನಿಲಗಳನ್ನು ಕುರಿತ ವಾಯುಗತಿವಿಜ್ಞಾನ (ಸೂಪರ್ ಏರೊಡೈನಮಿಕ್ಸ್). ರಾಕೆಟ್ (ಅಥವಾ ಕ್ಷಿಪಣಿ) ಒಂದು ಶಕ್ತಿಪ್ರೇರಕ ಸಾಧನವಾಗಿ ಇತ್ತೀಚೆಗೆ ಪೂರ್ಣಪರಿಷ್ಕಾರ ಗೊಂಡ ಅನಂತರ ವಿಮಾನ ಮತ್ತು ಮಿಸೈಲ್ ಏರುವ ಎತ್ತರಗಳಿಗೆ ಪ್ರಾಯೋಗಿಕ ಮಿತಿಯೇ ಇಲ್ಲ. ಎತ್ತರಕ್ಕೆ ಹೋದಂತೆ ವಾಯುಸಾಂದ್ರತೆ ಬಲು ವಿರಳ. ಇಲ್ಲಿ ತರಲವನ್ನು ಬಿಡುಕಣಗಳ ಸಮೂಹ, ಸಾಂಪ್ರದಾಯಿಕ ತರಲಬಲವಿಜ್ಞಾನದ ಅವಿಚ್ಛಿನ್ನ ವಾಹಕವಲ್ಲ ಎಂದು ಪರಿಗಣಿಸಬೇಕು. 

	ಬೇರೆ ಕ್ಷೇತ್ರದೊಡನೆ ಹೋಲಿಸುವಾಗ ಅತಿವಾಯುಚಲನವಿಜ್ಞಾನದ ಕ್ಷೇತ್ರ ಸಾಕಷ್ಟು ಅಭಿವರ್ಧಿಸಿರುವುದಿಲ್ಲ. ಇಲ್ಲಿ, ಅಲ್ಲಿ ಕೆಲವು ವಿಜ್ಞಾನಿಗಳು ದಾರಿ ಬಿಡಿಸಿದ್ದಾರೆ. ಅತಿ ಉನ್ನತಿಗಳಲ್ಲಿಯ ಪ್ಲಾವನಗಳು (ಫ್ಲೈಟ್ಸ್), ಮರುಪ್ರವೇಶದ ಸಮಸ್ಯೆಗಳು ಮುಂತಾದವುಗಳಲ್ಲಿ ಇದರ ಉಪಯೋಗಗಳು ಇರುವುದರ ಜೊತೆಗೆ ಅತಿವಾಯುಚಲನವಿಜ್ಞಾನ ಕನಿಷ್ಠ ಸಾಂದ್ರತೆಯ ಅನಿಲಗಳನ್ನು ಕುರಿತಾದ ಜಾಗರೂಕ ವ್ಯವಹಾರಗಳಲ್ಲಿಯೂ ಹಲವಾರು ಪ್ರಯೋಗಗಳನ್ನು ನಡೆಸಬೇಕು.				
		(ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ